Sunday, February 12, 2012

ಮುಂಜಾವ ಹುಡುಗಿ...

ಬೆಳಿಗ್ಗೆ ಎದ್ದ ಕ್ಷಣದಿಂದಲೇ ಯಾವುದೋ ಹಳೆಯ ಹಾಡಿನ ತುಣುಕು ಮತ್ತೆ ಮತ್ತೆ ನಾಲಿಗೆಯ ತುದಿಯಲ್ಲಿ ನರ್ತಿಸುತ್ತದೆ. ನಸುಕಿನ ಮಂಜನ್ನು ಸೀಳಿ ಚುಮು ಚುಮು ಬಿಸಿಲು ನಗುತ್ತಿರುವ ಭಾವ. ದಿನಾಲೂ ತಿನ್ನುವ ಬೆಳಗಿನ ಸೇಬು ಇವತ್ತು ತುಂಬಾ ಸಿಹಿಯಾಗಿದೆ! ಇದ್ದದುರಲ್ಲೇ ಹೊಸದಾಗಿರುವ ಶರ್ಟನ್ನು ನನಗೇ ಗೊತ್ತಿಲ್ಲದಂತೆ ಆರಿಸಿಕೊಳ್ಳುತ್ತೇನೆ. ಹೊರಬಂದರೆ, ಆಗಷ್ಟೇ ಮಳೆಯಲ್ಲಿ ಮಿಂದು ನಿಂತ ಲಂಡನ್ನಿನ ಬೆಳಗು ತಂಪೆರೆಯುತ್ತದೆ. ಶರದ್ ಋತುವಿನ ಕೆಂಪು-ಹಳದಿ ಮರಗಳ ರಂಗು ಮನಸೆಲ್ಲ ಆವರಿಸಿಕೊಳ್ಳುತ್ತದೆ. ಘಾಡ ಬಣ್ಣಗಳ ತೀವ್ರತೆಯೇ ಹಾಗೆ... ಹುಚ್ಚೆಬ್ಬಿಸುತ್ತದೆ. ನಾನು ನಡೆಯುವ ದಾರಿಗುಂಟ ಇರುವ ಗಿಡಗಳ ಮೇಲೆ ಇಬ್ಬನಿಯ ಹನಿಗಳು... ಬೆಳಗಿನ ಬಿಸಿಲಿಗೆ ಮುತ್ತಿನಂತೆ ಹೊಳೆಯುವ ಅವುಗಳ ಮಿಂಚು ಕಣ್ಣೊಳಗೆ ಸೇರಿಕೊಳ್ಳುತ್ತದೆ. ಅರೆ! ಇವತ್ತು ಮನಸೇಕೆ ಹೀಗೆ ಗರಿಬಿಚ್ಚಿ ಕುಣಿಯುತ್ತಿದೆ ?

ಇವತ್ತು ಬಸ್ಸು ಕೂಡ ಸತಾಯಿಸದೆ ಸರಿಯಾದ ಸಮಯಕ್ಕೆ ಹಾಜರು. ಇಯರ್ ಫೋನಲ್ಲಿ ರತ್ನಮಾಲಾ ಪ್ರಕಾಶ್... "ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ... ಎಲ್ಲಿರುವೆ ಹೇಳು ನೀ ನಿಜವೆ ನೆರಳೇ..." ಭಾವದಲ್ಲಿ ಅದ್ದಿ ತೆಗೆದ ಹಾಡು ಎದೆ ತುಂಬಿಕೊಳ್ಳುತ್ತದೆ. ಹಾಡಿನಲ್ಲಿ ಹುಡುಕಾಟದ ನೋವಿನ ಎಳೆಯಿದ್ದರೂ ನನ್ನ ಮನದ ತುಂಬ ಮರಗಳ ಕೆಂಪು-ಹಳದಿ... ಅರಿವಿಲ್ಲದೆ ಕಿರು ನಗುವೊಂದು ಹಾದು ಹೋಗುತ್ತದೆ

ಅವಳು ಬಸ್ಸು ಹತ್ತಿದ ಕ್ಷಣ... ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದ ಮನ ಹೊರಗಿನ ರಂಗನ್ನೆಲ್ಲ ಮರೆತು ಬಿಡುತ್ತದೆ! ಬೆಳದಿಂಗಳು ಆವರಿಸಿಕೊಂಡಂತೆಬಂಗಾರದ ಕೂದಲ ರಾಜಕುಮಾರಿ ಬರೀ ನನ್ನ ಚಂದಮಾಮ ಕಥೆಗಳ ಕಾಲದಲ್ಲಿದ್ದಳುಹೌದು! ಬಂಗಾರದ ಬಣ್ಣದ ಕೂದಲುಬಣ್ಣ ಹಾಕಿಕೊಂಡಿದ್ದಾಳಾ? ಇಲ್ಲ... ನೈಜವಾದ ರೆಷಿಮೆಯಂಥ ಬಂಗಾರದ ಬಣ್ಣದ ಕೂದಲು! ಶಿಲ್ಪಿ ನಾಜೂಕಾಗಿ ಕೆತ್ತಿದಂಥ ಮೈಕಟ್ಟು... ಹಾಲ ಕೆನೆಯಂಥ ಮೈಬಣ್ಣ... ಕ್ಷಣದಲ್ಲೇ ಮೈಮರೆಸಬಲ್ಲ ಮುದ್ದು ಮುಖ. ಉದ್ದನೆಯ ಕೆಂಪು ಕೋಟಿನಲ್ಲಿ ಕಂಬಕ್ಕೆ ಆನಿಸಿ ನಿಂತ ಅವಳು ಚಿತ್ರಕಾರನ ಕಲ್ಪನೆಯ ವರ್ಣಚಿತ್ರವೆನಿಸುತ್ತಿದ್ದಾಳೆ. ಹೊಂಬಣ್ಣದ ಮುಂಗುರುಳು ಅವಳ ಮುದ್ದು ಮುಖವನ್ನು ಮುತ್ತಿಡುತ್ತಿದೆ... ನಾನೇ ಮುಂಗುರುಳಾಗಬಾರದಿತ್ತೇ... ಇನ್ನೊಂದು ಜನ್ಮವಿದೆ ಎಂದಾದರೆ ಮುಂಗುರುಳಾಗಿ ಹುಟ್ಟಬೇಕು! ಮುಂಗುರುಳ ಹಿಂದೆ ಸರಿಸಿದ ಅವಳು, ಕತ್ತೆತ್ತಿ ಕಣ್ಣು ಹಾಯಿಸುತ್ತಾಳೆ... ಕಣ್ಣುಗಳು ಸಂಧಿಸುತ್ತವೆ... ಎದೆಯೊಳಗೆ ತಣ್ಣನೆಯ ಕೋಡಿ ಹರಿಯುತ್ತದೆ. ತೆಳುವಾದ ಕಾಡಿಗೆಯ ಕಾವಲಲ್ಲಿ ಹಸಿರು ಕಣ್ಣುಗಳು... ಬಿಲ್ಲಿನಂತೆ ಬಾಗಿರುವ, ಚೂಪಾದ ಅಂಚಿರುವ ಹುಬ್ಬುಗಳು ಕೊಂಚ ಮೇಲಕ್ಕೆ ಸರಿದು 'ಏನು ?' ಎಂಬಂತೆ ಪ್ರಶ್ನಿಸುತ್ತವೆ. ತುಟಿಗಳ ಕೊಂಚವೇ ಬಿರಿದ, ಲಜ್ಜೆಗೂಡಿದ ನಗೆಯೊಡನೆ ಅವಳ ನೋಟ ನೆಲ ಸೇರುತ್ತದೆ.


"ನಾನೆ ವೀಣೆ, ನೀನೆ ತಂತಿ, ಅವನೆ ವೈಣಿಕ..." ರತ್ನಮಾಲಾ ಪ್ರಕಾಶ್ಮನಸ್ಸಿನಾಳವ ತಟ್ಟುವ ಹಾಡು ತೇಲಿ ಬರುತ್ತದೆ. ಅವಳೊಲವು ನದಿಯಾಗಿ ಹರಿಯಬಾರದೇ? ಅವಳ ಒಲವಿಲ್ಲದ ಎದೆಗೆ ಸುಂದರ ಶರದ್ ಋತುವೂ ಬಿರು ಬೇಸಿಗೆಯಂತೆ... ಸೌಂದರ್ಯವೇ ಮೈವೆತ್ತ ಮುಂಜಾವೂ ಕಾರಿರುಳಂತೆಅವಳ ಒಲವಿನ ಹಂಬಲ ಕಾಡಿದಾಗ, ಯಾವ ಪ್ರಯತ್ನವೂ ಇಲ್ಲದೆ ಕವಿತೆಯ ಸಾಲುಗಳು ಹುಟ್ಟಿಕೊಳ್ಳುತ್ತವೆ...

ನನ್ನೊಳಗ ಬೇಸಿಗೆಯು
ಕಾಯುತಿದೆ
ಮಳೆಗೆ,
ನಿನ್ನೊಲವು ತಂಪೆರೆಯೆ
ಒಡಲ ಧಗೆಗೆ.

ಹಸಿಮಣ್ಣ ಅಂಗಳವು
ಕಾದಿಹುದು ಚೆಲುವೆ,
ನಿನ್ನ ಹೆಜ್ಜೆಯ ಗುರುತೆ
ರಂಗವಲ್ಲಿಯು ಅದಕೆ.

ಕಾರಿರುಳ ರಾತ್ರಿಯಿದು
ಕಾಯುತಿದೆ ಹುಡುಗಿ,
ನೀ ಬರಲು ಹೊನಲಾಗಿ
ದಿವ್ಯ ಪ್ರಭೆಯೇ ?

ಮನಸ್ಸು ಮಾತು ಕೇಳುತ್ತಿಲ್ಲ. ಹೆಣ್ಣೆಂಬ ಮಾಯೆಯನ್ನು ಸೃಷ್ಟಿಸಿದ ದೇವರನ್ನು ಬಯ್ಯುತ್ತೇನೆ! ಕಟ್ಟುಗಳನ್ನೆಲ್ಲ ಕಿತ್ತೆಸೆದು, ಸಭ್ಯತೆಯ ಎಲ್ಲೆ ಮೀರಿ, ಹಿಡಿತ ತಪ್ಪಿದ ನನ್ನ ನೋಟ ಅವಳನ್ನೇ ದಿಟ್ಟಿಸುತ್ತದೆ. ಅವಳ ತುಟಿಯಂಚಿಗೆ ಅಂಟಿಕೊಂಡ ಮುಗುಳ್ನಗೆ, ಕರುಣೆಯಿಲ್ಲದೆ ನನ್ನಂಥ ಒಳ್ಳೆಯ ಹುಡುಗನನ್ನು ಕೊಲ್ಲುತ್ತಿದೆ. ಯಾರಲ್ಲಿ ಮೊರೆಯಿಡಲಿ...?

ಉಸಿರ ಲಯ ತಪ್ಪಿಸಿದ ಇಪ್ಪತ್ತು ನಿಮಿಷ ಕೊನೆಯಾಗುತ್ತದೆ. ಕೊನೆಗೂ ಅವಳು ನಿಲ್ದಾಣವೊಂದರಲ್ಲಿ ಇಳಿದು ಹೋಗುತ್ತಾಳೆ. ಬೆಳದಿಂಗಳು ಕಳೆದು ಹೋದ ಭಾವ... ನನ್ನ ನಿಲ್ದಾಣ ಬರುತ್ತದೆ, ತಲೆ ಕೊಡವಿ ಕೆಳಗಿಳಿಯುತ್ತೇನೆ...

ಇವತ್ತು ಅದೇನು ಕೆಲಸ ಮಾಡಿದೆನೋ ದೇವರಿಗೇ ಗೊತ್ತು. ಸಂಜೆ ಮನೆಗೆ ಹಿಂದಿರುಗುವಾಗ ಬಸ್ಸಿನಲ್ಲಿ ಬೇಡವೆಂದರೂ ನನ್ನ ಕಣ್ಣುಗಳು ಅವಳನ್ನು ಹುಡುಕುತ್ತವೆ! ಅವಳು ಕಾಣದ ಕ್ಷಣ…"ಮತ್ತದೇ ಬೇಸರ, ಅದೇ ಸಂಜೆ... ಅದೇ ಏಕಾಂತ..." ರತ್ನಮಾಲಾ ಪ್ರಕಾಶ್ ಭಾವ ತೀವ್ರತೆಯೊಂದಿಗೆ ಮನವನ್ನು ತಟ್ಟುತ್ತಾಳೆ... 

ರಾತ್ರಿ ನಿದ್ದೆ ಹತ್ತಿರವೂ ಸುಳಿಯುವುದಿಲ್ಲ... ನನ್ನದೇನೂ ತಪ್ಪಿಲ್ಲ! ಹಾಸಿಗೆಯಲ್ಲಿ  ಹೊರಳಾಡುವಾಗ ಇನ್ನೊಂದು ಕವಿತೆ ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುತ್ತದೆ...

ಅರ್ಧ ರಾತ್ರಿಯವರೆಗೆ
ತೆರೆದ ಕಂಗಳ ಮುಂದೆ
ನಿನ್ನದೇ ಬಿಂಬ,
ರೆಪ್ಪೆಗಳು ಸೋತು
ಕಣ್ಮುಚ್ಚಿಕೊಂಡಾಗ
ಕನಸಿನಲ್ಲೂ ಕಾಡುವೆಯಲ್ಲೇ !!!

ಅವಳ ನೆನಪಿನ ಸುಳಿಯಲ್ಲಿ ಸಿಕ್ಕ ಮನ ಹೊರ ಬರಲು ವ್ಯರ್ಥ ಹೋರಾಟ ನಡೆಸಿದೆ... ಹಿನ್ನೆಲೆಯಲ್ಲಿ "ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ..." ರತ್ನಮಾಲಾ ಪ್ರಕಾಶ್ ಮತ್ತೆ ಕಾಡುತ್ತಾಳೆ...

ಪ್ರೀತಿಯಿಂದ...
ಕಿರಣ್

Tuesday, January 11, 2011

ಹೀಗೊಂದು ಆರೋಹಣ... ಜೇನುಕಲ್ಲು ಗುಡ್ಡ - ಎತ್ತಿನ ಭುಜ ಚಾರಣ...

ವರುಷವೊಂದು ಅಸ್ತಮಿಸುವ ವೇಳೆಯಲ್ಲಿ ಚಾರಣಕ್ಕೆ ಸಿಧ್ಧವಾಗಿ ಬಸ್ ನಿಲ್ದಾಣದಲ್ಲಿ ನಿಂತ ನಮ್ಮ ಗುಂಪು ಹೊಸ ವರುಷದ ಹೋರಾಟಕ್ಕೆ ಸನ್ನದ್ಧವಾದಂತೆ ತೋರುತ್ತಿತ್ತು. ರವಿ ಮತ್ತು ಸುಂಡಿಯನ್ನು ಬಿಟ್ಟರೆ ಉಳಿದ ಏಳು ಜನರ ಪರಿಚಯ ಕೂಡ ನನಗಿರಲಿಲ್ಲ. ಶಾಸ್ತ್ರಾಚಾರದಂತೆ ಹೆಸರುಗಳು ವಿನಿಮಯವಾದವು, ಮರುಕ್ಷಣದಲ್ಲಿ ಮರೆತು ಕೂಡ ಹೋದವು! ಎರಡು ದಿನಗಳ ಹಾದಿಯಲ್ಲಿ ಮನದೊಳಗೆ ಗಟ್ಟಿಯಾಗುತ್ತವೆ ಬಿಡು ಎಂದು ನಾನು ಸುಮ್ಮನಾದೆ. ಗೋಪಿ ಸಾಕಷ್ಟು ಪೂರ್ವ ತಯಾರಿ ನಡೆಸಿದ್ದರೆಂದು ತೋರುತ್ತದೆ, ಎರಡು ದಿನಗಳಿಗೆ ಸಾಕಾಗುವಷ್ಟು ಹಣ್ಣುಗಳು, ಒಣ ಹಣ್ಣುಗಳು ನಮ್ಮೆಲ್ಲರ ಬೆನ್ನಿಗೇರಿದವು.

ಒಂಭತ್ತುವರೆಯ ಬಸ್ಸನ್ನು ತಪ್ಪಾಗಿ ಹತ್ತಿ ಇಳಿದ ನಂತರ, ಹತ್ತು ಗಂಟೆಯ ಕರ್ನಾಟಕ ಸಾರಿಗೆ ಬಸ್ಸಿನ ಕೊನೆಯ ಆಸನಗಳು ನಮ್ಮ ಸೇವೆಗೆ ಸಿಧ್ಧವಾಗಿದ್ದವು! ಹಳ್ಳ ಕೊಳ್ಳಗಳ ಪರಿವೆಯಿಲ್ಲದೆ ಮುನ್ನುಗ್ಗುತ್ತಿದ್ದ ಬಸ್ಸು ನಮ್ಮನ್ನು ಮೂಡಿಗೆರೆಯಲ್ಲಿ ಎಸೆದದ್ದಷ್ಟೇ ಗೊತ್ತು. ಆವಾಗಲಷ್ಟೇ ಎದ್ದೇಳುತ್ತಿದ್ದ ಮೂಡಿಗೆರೆ ನಮ್ಮ ಹೊಟ್ಟೆಗೆ ಮೋಸ ಮಾಡಲಿಲ್ಲ. ಟೀ, ಇಡ್ಲಿ, ಕಾಫಿಗಳ ಸಮಾರಾಧನೆಯ ವೇಳೆಗೆ ಚಾರಣದ ಜನಪ್ರಿಯ ಪಾತ್ರ ಫರ್ನಾಂಡಿಸ್(ಕ್ರಿಶ್ಚಿಯನ್) ಅವರ ಪ್ರವೇಶವೂ ಆಯಿತು.

ಮುಂದಿನ ಒಂದು ಗಂಟೆಯ ಫರ್ನಾಂಡಿಸರೊಂದಿಗಿನ ಟಾಟಾ ಸುಮೋ ಪಯಣದ ಬಗ್ಗೆ ಒಂದು ಪ್ರತ್ಯೇಕ ಲೇಖನವನ್ನೇ ಬರೆಯಬಹುದು :) ನೀವೇನಾದರೂ ಮೂಡಿಗೆರೆಗೆ ಹೋದರೆ ಫರ್ನಾಂಡಿಸ್ ಅವರ ಸುಮೋದಲ್ಲಿ ಕುಳಿತುಕೊಳ್ಳಲೇ ಬೇಕು. ಮೂಡಿಗೆರೆ ನಮಗೆಲ್ಲ ಯಾವುದೋ ಊರೆನಿಸದೆ ಆಪ್ತ ಎನಿಸುವುದು ತೇಜಸ್ವಿಯವರ ಪುಸ್ತಕಗಳಿಂದ. ತೇಜಸ್ವಿಯವರನ್ನು ಬಿಟ್ಟರೆ ನನಗೀಗ ಮೂಡಿಗೆರೆ ಎಂದರೆ ನೆನಪಾಗುವುದು ಫರ್ನಾಂಡಿಸ್ ಮಾತ್ರ! ಫರ್ನಾಂಡಿಸ್ ಅವರು ನಮ್ಮನ್ನೆಲ್ಲ ಭೈರವೇಶ್ವರ ದೇವಸ್ಥಾನದ ಬಳಿ ಇಳಿಸಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿ ಹೊರಟು ಹೋದರು. ಅವರ ಮಾತುಗಳು ಮಾತ್ರ ಚಾರಣದುದ್ದಕ್ಕೂ ಚರ್ಚೆಯಲ್ಲಿದ್ದವು.

ಇದ್ದುದರಲ್ಲೇ ಸ್ವಚ್ಛತೆಯ ಬಗ್ಗೆ ಕಾಳಜಿಯಿದ್ದವರು ಹಲ್ಲುಜ್ಜುವುದರಲ್ಲಿ ನಿರತವಾಗಿದ್ದರೆ, ನಾವು ಗುಡಾರಗಳಿದ್ದ ಚೀಲಗಳನ್ನು ನಮ್ಮ ಬ್ಯಾಗ್ ಗಳಿಗೆ ಕಟ್ಟುತ್ತಿದ್ದೆವು. ಮಹೇಶ ಮತ್ತು ಅಶ್ವಲ್ ನಕಾಶೆ ಓದುವುದರಲ್ಲಿ ನಿರತವಾಗಿದ್ದರು. ಅಲ್ಲಿಂದ ಒಂಭತ್ತು ಗುಡ್ಡಕ್ಕೆ ಹೋಗುವ ದಾರಿಯ ಒಗಟನ್ನು ಬಿಡಿಸಲು ಅವರು ಪ್ರಯತ್ನಿಸುತ್ತಿರುವಾಗಲೇ ನಮ್ಮ ಮಾರ್ಗದರ್ಶಕರಾದ ಮಂಜು ಮತ್ತು ಅಭಿ ಅವರ ಪ್ರವೇಶವಾಯಿತು. ಅತ್ತ ದೇವಸ್ಥಾನದ ಭಟ್ಟರು ಶೃತಿ, ಲತಾ ಮತ್ತು ಪುಟ್ಟಿ ಅವರಿಗೆ ಬೆಂಗಳೂರಿನಿಂದ ಬಂದ ಹುಡುಗರು ಮಾರ್ಗದರ್ಶಕರಿಲ್ಲದೆ ಕಾಡಿಗೆ ಹೋಗಿ ದಾರಿ ತಪ್ಪಿದ ಕಥೆ ಹೇಳುತ್ತಿದ್ದರು.

ಚಾರಣದ ಮೊದಲ ತಿರುವಾಗಿ ಮಂಜು ಮತ್ತು ಅಭಿ, ಒಂಭತ್ತು ಗುಡ್ಡಕ್ಕೆ ಇಲ್ಲಿಂದ ಹೋಗುವುದು ಸಾಧ್ಯವೇ ಇಲ್ಲವೆಂದೂ, ಜೇನುಕಲ್ಲು ಗುಡ್ಡಕ್ಕೆ ಮಾತ್ರ ನಮ್ಮನ್ನು ಕರೆದೊಯ್ಯಬಹುದೆಂದೂ ಪಟ್ಟು ಹಿಡಿದರು. ಅವರು ಜೇನುಕಲ್ಲು ಗುಡ್ಡ ಬರೀ ಮೂರು ಕಿಲೋ ಮೀಟರ್ ಇದೆ ಎಂದಾಗ ನಾನು ಮತ್ತು ರವಿ "ಬೆಂಗಳೂರಿಂದ ಇಲ್ಲಿಗೆ ಬಂದು ಬರಿ ಮೂರು ಕಿಲೋ ಮೀಟರ್ ಚಾರಣ ಮಾಡಬೇಕಾ?" ಎಂದು ಗೊಣಗುತ್ತಾ ಹೊರಟೆವು. ಆದರೆ ನಮಗೆ ಮುಂದಿನ ನಿಜವಾದ ಸವಾಲುಗಳ ಅರಿವಿರಲಿಲ್ಲ!

ಹೊಸ ವರ್ಷದ ಮೊದಲ ಸೂರ್ಯ ರಶ್ಮಿಗಳು ನೆಲವನ್ನು ತಾಕುತ್ತಿರುವಂತೆ, ಆಕಾಶವನ್ನು ಚುಂಬಿಸುವ ಮಲೆನಾಡ ಶೃಂಗಗಳ ತಪ್ಪಲಲ್ಲಿ ನಮ್ಮ ಚಾರಣ ಪ್ರಾರಂಭವಾಯಿತು. ತಮಾಷೆಯ ಮಾತುಗಳು, ನಗೆಯ ಅಲೆಗಳು ಪರ್ವತಗಳ ಮಡಿಲಲ್ಲಿ ಪ್ರತಿಧ್ವನಿಗಯ್ಯುತ್ತಿರಲು ನಮ್ಮ ಪಯಣ ನಿಧಾನವಾಗಿ ಸಾಗುತ್ತಿತ್ತು. ಜೌಗು ಪ್ರದೇಶವೊಂದನ್ನು ದಾಟುವಾಗ ಹೂಳಿನಲ್ಲಿ ಹೂತುಹೋಗಿ ನಮ್ಮ ಬೂಟುಗಳಿಗೆಲ್ಲ ಕೆಸರಿನ ಅಭಿಷೇಕವೂ ಆಯಿತು. ಒದ್ದೆಯಾದ ಕಾಲುಚೀಲ ಬೂಟುಗಳ ಭಾರದೊಂದಿಗೆ ಭಾರವಾದ ಹೆಜ್ಜೆಗಳನ್ನಿಡುತ್ತಾ ಮೇಲೇರಲು ಪ್ರಾರಂಭಿಸಿದೆವು. ನನ್ನ ಪ್ರೀತಿಯ, ಅಚ್ಚ ಬಿಳಿಯಾದ ಬೂಟು ತಿರುಗಿ ಬರಲಾಗದ ಬಣ್ಣಕ್ಕೆ ಬದಲಾಗಿತ್ತು. ಕಿತ್ತಳೆ, ಮೋಸಂಬಿ, ಖರ್ಜೂರಗಳ ಸೇವೆ ಧಾರಾಳವಾಗಿ ಸಾಗುತ್ತಿರಲು, ನಾವು ಜೇನುಕಲ್ಲು ಗುಡ್ಡದ ಬುಡವನ್ನು ತಲುಪಿದ್ದೆವು. ಅಷ್ಟೊತ್ತಿಗಾಗಲೇ ಎಲ್ಲರಿಗೂ ಸುಸ್ತು ಹೊಡೆದಿತ್ತು. ಆವಾಗಲೇ ನಮಗೆ ಮೂರು ಕಿಲೋ ಮೀಟರ್ ಬಗ್ಗೆ ಸಂಶಯ ಶುರುವಾಗಿದ್ದು :) ನಾನು ಅಭಿಯನ್ನು ಕೇಳಿದರೆ ಮೂರು ಕಿಲೋ ಮೀಟರ್ ಸುಳ್ಳನ್ನು ಹೇಳಿಲ್ಲವೆಂದರೆ, ಗುಡ್ಡದ ಎತ್ತರವನ್ನು ನೋಡಿ ಬೆಂಗಳೂರಿನಿಂದ ಬಂದವರು ಚಾರಣವನ್ನು ಪ್ರಾರಂಭಿಸುವುದೇ ಇಲ್ಲವೆಂದ!

ಅಶ್ವಲ್, ನಾನು ಮತ್ತು ಮಹೇಶ ಜೇನುಕಲ್ಲು ಗುಡ್ಡದ ತುದಿಯೆಡೆಗೆ ಹತ್ತಲು ಪ್ರಾರಂಭಿಸಿದೆವು. ಆವಾಗಲೇ ನಮಗೆ ಅದೆಷ್ಟು ಕಡಿದಾದ ಪರ್ವತ ಎಂಬ ಅರಿವಾಗಿದ್ದು. ಕೈ ಕಾಲುಗಳನ್ನೆಲ್ಲ ಬಳಸಿ ತುದಿಯನ್ನು ತಲುಪಿದಾಗ ಪ್ರಪಂಚವನ್ನೇ ಗೆದ್ದಂಥ ಭಾವ! ಒಬ್ಬೊಬ್ಬರಾಗಿ ತುದಿಯನ್ನು ತಲುಪಿ ಕೇಕೆ ಹಾಕಿದ್ದಾಯಿತು. ಎಲ್ಲಿ ನೋಡಿದರಲ್ಲಿ ಹಸಿರು, ಮಂಜನ್ನು ಹೊತ್ತು ತರುವ ತಂಗಾಳಿ, ಮರು ಕ್ಷಣದಲ್ಲೇ ಸೂರ್ಯನ ಉರಿ ಬಿಸಿಲು. ಯಾವುದೋ ಬೇರೆಯೇ ಲೋಕದಲ್ಲಿರುವಂಥ ಅನುಭವ. ಪ್ರಕೃತಿಯ ಸೌಂದರ್ಯದ ಮುಂದೆ ಮನಸ್ಸು ಮೂಕವಾಗುತ್ತದೆ. ಅಶ್ವಲ್ ಮತ್ತು ಮಹೇಶ ನಕಾಶೆ ತೆರೆದು ನಾವೆಲ್ಲಿದ್ದೇವೆ ಎಂದು ಹುಡುಕುವ ವ್ಯರ್ಥ ಪ್ರಯತ್ನದಲ್ಲಿದ್ದರೆ, ನಾನು ನಿಸರ್ಗ ಸಿರಿಯ ಭವ್ಯತೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ವ್ಯರ್ಥ ಪ್ರಯತ್ನದಲ್ಲಿದ್ದೆ.

ಸ್ವಲ್ಪ ವಿಶ್ರಾಂತಿ ಪಡೆದು, ವಾಪಸ್ಸು ಇಳಿಯೋಣವೆಂದು ಕುಳಿತಲ್ಲಿಂದ ಎದ್ದೆವು. ಮಂಜು "ಇಲ್ಲಿಂದ ಕೆಳಗಿಳಿಯಬೇಕು" ಎಂದು ತೋರಿಸಿದಾಗ, ಎಲ್ಲರ ಕೈ ಕಾಲುಗಳು ನಡುಗುತ್ತಿದ್ದವು! ಆಳವಾದ ಪ್ರಪಾತಕ್ಕೆ ಮುಖ ಮಾಡಿ ನಿಂತಿದ್ದ ಜೇನುಕಲ್ಲು ಗುಡ್ಡದ ಬಹುತೇಕ ಲಂಬವಾದ ಮೇಲ್ಮೈ ಮೇಲಿಂದ ಕೆಳಗಿಳಿಯಬೇಕಿತ್ತು, ಅಲ್ಲಿ ಕಾಲು ದಾರಿ ಕೂಡ ಇರಲಿಲ್ಲ! ನಮ್ಮೆಲ್ಲರಿಗೂ ನಾವೆಂಥ ಹುಚ್ಚುತನಕ್ಕೆ ಕೈ ಹಾಕಿದ್ದೇವೆ ಎಂಬುದರ ಅರಿವಾಗಿ ಹೋಗಿತ್ತು. ಮೇಲೆ ಹತ್ತಿದ ಮೇಲೆ ಕೆಳಗೆ ಇಳಿಯಲೇ ಬೇಕು ಎಂಬುವುದು ಜಗದ ನಿಯಮ :) ತೆವಳುತ್ತ, ಕುಂಟುತ್ತ ಇಳಿಯಲು ಪ್ರಾರಂಭಿಸಿದೆವು. 'ಕಾಲಿಟ್ಟಲ್ಲಿ ಕಾಲುದಾರಿ' ಎಂದೆನ್ನುತ್ತ ಇಳಿಯುತ್ತಿದ್ದರೆ, ಕೆಳಗೆ ಮುಟ್ಟುತ್ತೇವೆಂಬ ಭರವಸೆ ಕೂಡ ಇರಲಿಲ್ಲ. ಕಾಲು ಜಾರಿ ಯಾರ್ ಯಾರು ಎಷ್ಟು ಸಾರಿ ಬಿದ್ದರು ಎಂಬ ಲೆಕ್ಕವಿಡುವುದು ಸಾಧ್ಯವಿರಲಿಲ್ಲ. ಪುಟ್ಟಿ, ಮಂಜು ಮತ್ತು ಉಪ್ಪಿಯರೊಂದಿಗೆ ಎಲ್ಲರಿಗಿಂತ ಮುಂದೆ ಇಳಿಯುತ್ತಾ, ಅಲ್ಲಿಂದ ಮನುಷ್ಯ ಮಾತ್ರರು ಇಳಿಯಬಹುದು ಎಂಬ ಭರವಸೆ ಹುಟ್ಟಿಸುತ್ತಿದ್ದಳು :) ಆವರಿಸಿಕೊಂಡಿದ್ದ ಮಂಜು ಒಮ್ಮೆ ನಮ್ಮ  ದಾರಿ ತಪ್ಪಿಸಿ ಪ್ರಪಾತದ ಅಂಚಿನಲ್ಲಿ ತಂದು ನಿಲ್ಲಿಸಿತ್ತು! ಮತ್ತೆ ಅಲ್ಲಿಂದ ಹಿಂತಿರುಗಿ ದೀಪದ ಗುಡ್ಡದ ಕಡೆಗೆ ಇಳಿಯ ತೊಡಗಿದೆವು. ಮಂಜು ಮತ್ತು ಅಭಿ ಅವರೇ ದಾರಿಯನ್ನು ಹುಡುಕ ತೊಡಗಿದಾಗ, ಆವಾಗಲೇ ನಡೆದೂ ನಡೆದೂ ಸುಸ್ತಾಗಿದ್ದ ಗೋಪಿ ಚೆನ್ನಾಗಿ ಅವರನ್ನೊಮ್ಮೆ ಬಯ್ದಿದ್ದೂ ಆಯಿತು. ಎಲ್ಲಿ ಕಾಲು ಎಡವಿತೋ, ಎಲ್ಲಿ ಕೈ ತರಚಿತೋ ಯಾರಿಗೂ ಪರಿವೆಯಿರಲಿಲ್ಲ. ಹೊಟ್ಟೆ ಬೇರೆ ತಾಳ ಹಾಕುತ್ತಿತ್ತು. ಅಷ್ಟೊತ್ತಿಗೆ ದೂರದಲ್ಲೆಲ್ಲೋ ಕೆಳಗಡೆ ಓಡಾಡುವ ಜನ ಕಾಣಿಸಿದರು. ನಮ್ಮ ಊಟ ಅಲ್ಲಿದೆ ಎಂದು ಗೊತ್ತಾದದ್ದೆ ಹಸಿವು ಕಾಲನ್ನು ಆ ಕಡೆ ಎಳೆಯ ತೊಡಗಿತು. ಅಂತೂ ಏಳುತ್ತ ಬೀಳುತ್ತ ಊಟವಿರುವ ಜಾಗ ತಲುಪಿದ್ದಾಯಿತು. ಹಸಿದ ಹೊಟ್ಟೆಗೆ ಸ್ವಾದಿಷ್ಟ ಚಿತ್ರಾನ್ನ, ಮೊಸರನ್ನ, ಉಪ್ಪಿನಕಾಯಿಗಳು ಬಿದ್ದಮೇಲೆ ಹೊಸ ಹುಟ್ಟು ಪಡೆದಂತೆ :) ಮೂರು ಕಿಲೋ ಮೀಟರ್ ಎಂದು ಪ್ರಾರಂಭವಾದ ಚಾರಣ ಸುಮಾರು ಇಪ್ಪತ್ತು ಕಿಲೋ ಮೀಟರ್ ಗಳಿಗಿಂತ ಹೆಚ್ಚು ಉದ್ದವಾಗಿ ಹೋಗಿತ್ತು!

ಅಲ್ಲಿಂದ ಗುಂಡ್ಯದ ಕಡೆಗೆ ಹೋಗಬೇಕಿದ್ದ ನಮ್ಮ ಉದ್ದೇಶವನ್ನು ಆನೆ ಹಾವಳಿ ವಾಪಸ್ಸು ಭೈರವೇಶ್ವರ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕುವಂತೆ ಮಾಡಿತು. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ನಮ್ಮ ಗುಡಾರಗಳನ್ನು ನಿಲ್ಲಿಸಲು ತೊಡಗಿದಾಗ ಹೊತ್ತು ಕಂತುತ್ತಿತ್ತು, ಇನ್ನೊಂದೆಡೆ ಬಿಸಿ ಬಿಸಿ ಕಾಫಿ ತಯಾರಾಗಿತ್ತು. ಶಿಬಿರದ ಮಧ್ಯೆ ಬೆಂಕಿ ಹತ್ತಿಸುವ ಹೊತ್ತಿಗೆ ಊಟದ ಸಮಯ. ನಡುಗುವ ಛಳಿಯಲ್ಲಿ ಉರಿಯುವ ಬೆಂಕಿಯ ಮುಂದೆ ಕುಳಿತು ರುಚಿಕರವಾದ ಚಪಾತಿ, ಚಟ್ನಿ, ಚಿತ್ರಾನ್ನಗಳನ್ನು ಸವಿಯುವ ಸುಖದ ಮುಂದೆ ಉಳಿದೆಲ್ಲವೂ ಶೂನ್ಯವಾಗಿಬಿದುತ್ತದೆ.

ನಾನು ರವಿ ಮತ್ತು ಸುಂಡಿ ಒಂದು ಗುಡಾರ ಸೇರಿಕೊಂಡೆವು. ರವಿ ಮತ್ತು ಸುಂಡಿಯ ಶೃತಿ ಸೇರಿದ ಗೊರಕೆ ಕಾಡುಪ್ರಾಣಿಗಳಿಂದ ನಮ್ಮನ್ನು ಕಾವಲು ಕಾಯುತ್ತಿದ್ದರೆ ಉಪ್ಪಿಯ ಆಲಾರಾಂ ಸೂರ್ಯೋದಯವನ್ನು ನೋಡಲು ನಮ್ಮೆಲ್ಲರನ್ನೂ ಎಬ್ಬಿಸಿತು. ಇನ್ನೂ ಬಿಸಿಯಿದ್ದ ಉರಿಯನ್ನು ಇನ್ನೊಮ್ಮೆ ಹೊತ್ತಿಸಿ ಆ ಛಳಿಯಲ್ಲಿ ಅಶ್ವಲ್ ಮಾಡಿದ ಕಾಫಿಯನ್ನು ಕುಡಿಯುತ್ತಾ ಸೂರ್ಯೋದಯವನ್ನು ವೀಕ್ಷಿಸುವ ಸುಖವನ್ನು ವರ್ಣಿಸಲು ಸಾಧ್ಯವಿಲ್ಲ! ಬೆಟ್ಟ, ಮೋಡಗಳ ಮರೆಯಿಂದ ಎದ್ದು ಬರುವ ಸೂರ್ಯನ ಹೊಂಗಿರಣಗಳು ಮಂಜಿನಲ್ಲಿ ಕುತ್ತಿಗೆಯವರೆಗೂ ಹೂತು ಹೋದ ಶೃಂಗಗಳನ್ನು ಬೆಳಗುವ ಪ್ರಕೃತಿಯ ಸೊಬಗು ಕಣ್ಣಿಗೆ ಹಬ್ಬ.

ಸ್ವಲ್ಪ ಹೊತ್ತಿಗೇ ನಮ್ಮನ್ನು ಎತ್ತಿನ ಭುಜವನ್ನು ಹತ್ತುವ ದಾರಿಯವರೆಗೆ ಬಿಡಲು 'ಮರೆಯಲಾಗದ ಓಮ್ನಿ'ಯ ಆಗಮನವಾಯಿತು :) ಹತ್ತು ಜನ ಒಂದು ಓಮ್ನಿಯೊಳಗೆ ಉಪ್ಪಿನಕಾಯಿಯಂತೆ ಸೇರಿಕೊಂಡೆವು! ಕಡಿದಾದ ಏರು ರಸ್ತೆಯಲ್ಲಿ ಮೇಲೇರುತ್ತಿರುವಾಗ ಎದುರಿಗೆ ಬಂದ ದನದ ಹಿಂಡನ್ನು ನೋಡಿ ಡ್ರೈವರ್ ಬ್ರೇಕ್ ಹಾಕಿದ್ದಷ್ಟೇ ಗೊತ್ತು, ಓಮ್ನಿ ಹಿಂದೆ ಹೋಗಲು ತೊಡಗಿತು! ಅದನ್ನು ಹೇಗೋ ಸಂಭಾಳಿಸಿದ ಡ್ರೈವರ್ ಬಲಗಡೆ ಇದ್ದ ಗುಡ್ಡದ ಬದಿಯ ಚಿಕ್ಕ ಕಾಲುವೆಯಲ್ಲಿ ನಿಲ್ಲಿಸುವುದರಲ್ಲಿ ಸಫಲನಾದ. ಎಡಗಡೆ ಹೋದಲ್ಲಿ ಗುಡ್ಡದ ಆಳಕ್ಕೆ ಓಮ್ನಿ ಉರುಳು ಸೇವೆ ಮಾಡಬೇಕಿತ್ತು ಎಂಬುದು ಇಳಿದ ಮೇಲೇ ನಮಗೆಲ್ಲ ಅರಿವಾಗಿದ್ದು! ಎಂಟೂ ಜನ ಹುಡುಗರು ಕೂಡಿ ಇದ್ದ ಬಿದ್ದ ಶಕ್ತಿಯನ್ನೆಲ್ಲ ಹಾಕಿ ಒಮ್ನಿಯನ್ನು ಬಿದ್ದಲ್ಲಿಂದ ರಸ್ತೆಗೆ ಎತ್ತಿದ್ದಾಯಿತು. ಹೆಚ್ಚಿಗೆ ಏನೂ ಅನಾಹುತವಾಗದೆ ಓಮ್ನಿ ಪುರಾಣ ತಮಾಷೆಯಲ್ಲೇ ಮುಕ್ತಾಯವಾದದ್ದು ನಮ್ಮ ಪುಣ್ಯ! ದೇವರ ದಯೆ :)

ಇನ್ನೊಂದು ಬಾರಿ ಗಡದ್ದಾಗಿ ಚಪಾತಿ, ಚಟ್ನಿ, ಚಟ್ನಿಪುಡಿಗಳ ಸಮಾರಾಧನೆಯಾಯಿತು. 'ಎತ್ತಿನ ಭುಜ' ಪರ್ವತವನ್ನು ಕತ್ತೆತ್ತಿ ನೋಡಿದ ಮೇಲೆ, ಹತ್ತಲು ಮನಸ್ಸು ಮಾಡಿದ್ದು ನಾವೈದೇ ಜನ. ನಾನು, ಮಹೇಶ, ಸುಂಡಿ, ಅಶ್ವಲ್ ಮತ್ತು ಲತಾ ದಾರಿ ತುಳಿಯ ತೊಡಗಿದೆವು. ಆರಂಭದ ಸ್ವಲ್ಪ ಭಾಗ ಕಾಡಿನೊಳಗೆ ಸಾಗುವ ದಾರಿ ನಮ್ಮನ್ನು ಕಡಿದಾಗಿರುವ ಎತ್ತಿನ ಭುಜದ ಶೃಂಗದ ಬುಡಕ್ಕೆ ತಂದು ನಿಲ್ಲಿಸುತ್ತದೆ. ಕತ್ತೆತ್ತಿ ನೋಡಿದರೆ ಹತ್ತುವುದು ಅಸಾಧ್ಯ ಎನಿಸುವ ಎತ್ತಿನ ಭುಜ, ಜೇನುಕಲ್ಲು ಗುಡ್ಡವನ್ನು ಹಿಂದಿನ ದಿನವಷ್ಟೇ ಹತ್ತಿಳಿದಿದ್ದ ನಮಗೆ ದೊಡ್ಡ ಸವಾಲೆನಿಸಲಿಲ್ಲ. ಅಂದುಕೊಂಡದ್ದಕ್ಕಿಂತ ಬೇಗನೆ ತುದಿ ಮುಟ್ಟಿ ಎಲ್ಲೆಡೆಯೂ ಪ್ರತಿಧ್ವನಿಸುವಂತೆ ಕಿರುಚಿದ್ದಾಯಿತು. ಸ್ವಲ್ಪ ವಿಶ್ರಮಿಸಿ ವಾಪಸ್ಸು ಹೊರಟೆವು. ಹಿಂತಿರುಗಿ ದಾರಿ ಸವೆಸುತ್ತಾ ಉಪ್ಪಿಯ ಆಕ್ಸಿಡೆಂಟ್ ಕಥೆಗಳು... ಮಹೇಶನ ಫುಟ್ಬಾಲ್ ಪುರಾಣ... ಶಾಲೆ-ಕಾಲೇಜಿನ ದಿನಗಳು... ತೇಜಸ್ವಿಯವರ ಪುಸ್ತಕಗಳು ... ದಾರಿ ಖರ್ಚಿಗಾದವು. ವಾಪಸ್ಸು ತಲುಪುವ ಹೊತ್ತಿಗೆ, ಪಕ್ಕದಲ್ಲಿದ್ದ ದೇವಸ್ಥಾನದಲ್ಲಿ ಗಣ ಬಂದಿದ್ದನ್ನು ನೋಡಿ ಬಂದು ಕುಳಿತಿದ್ದ ಉಳಿದವರು ಸ್ವಾರಸ್ಯಕರ ಚರ್ಚೆ ಪ್ರಾರಂಭಿಸಿದ್ದರು. ಸ್ವಲ್ಪ ಹೊತ್ತು ತಮಾಷೆ, ನಗುಗಳು ಓಡಾಡಿದ ಮೇಲೆ, ಅಲ್ಲೇ ಇದ್ದ ಕೆರೆಯ ಪಕ್ಕದಲ್ಲಿ ಮ್ಯಾಗಿ, ನಿಂಬೆ ಮಿಶ್ರಿತ ಚಹ ಹಸಿವು ತಣಿಸಿದವು.

ಅಲ್ಲಿಂದ ವಾಪಸ್ಸು ಬಸ್ಸು ಸಿಗುವಲ್ಲಿಗೆ ನಡೆದು ಬಂದು, ಬಸ್ಸು ಹತ್ತಿ ಮೂಡಿಗೆರೆ ಸೇರುವ ಹೊತ್ತಿಗೆ ಸಂಜೆಯಾಗಿತ್ತು. ಅಲ್ಲಿ ವಿಚಾರಿಸಿದಾಗ ಬೆಂಗಳೂರಿಗೆ ನೇರವಾಗಿ ಬಸ್ಸು ಇಲ್ಲವೆಂದೂ, ಬೇಲೂರಿಗೋ ಇಲ್ಲ ಚಿಕ್ಕಮಗಳೂರಿಗೋ ಹೋಗಬೇಕೆಂದರು. ಅಲ್ಲಿಂದ ಚಿಕ್ಕಮಗಳೂರಿಗೆ ಬಂದು, ಟೌನ್ ಕ್ಯಾಂಟೀನ್ ನಲ್ಲಿ ಪ್ರಸಿದ್ಧವಾದ ದೋಸೆ ತಿಂದಿದ್ದಾಯಿತು. ಗುಡಾರವೊಂದನ್ನು ರಿಕ್ಷಾದಲ್ಲೇ ಬಿಟ್ಟು ಬಂದು ಚಿಕ್ಕಮಗಳೂರನ್ನೆಲ್ಲ ಸುತ್ತಿದ್ದೂ ಆಯಿತು. ಬೆಂಗಳೂರನ್ನು ತಲುಪಲು ನಮ್ಮೆಲ್ಲರ ಪ್ರೀತಿಯ ಕರ್ನಾಟಕ ಸಾರಿಗೆ ಬಸ್ಸಿಗೆ ಕಾಯುತ್ತಿರುವಾಗ, ಪುಟ್ಟಿ, ಫೇಲಾಗುತ್ತಲೇ ಪಾಸಾದ ಹುಡುಗನ ಸ್ವಾರಸ್ಯಕರ ಕಥೆ ಹೇಳುತ್ತಿದ್ದಳು :) ಮರುದಿನ ಬೆಳಗಿನ ಜಾವ ಬಸ್ಸು ನಮ್ಮನ್ನು ಪ್ರಕೃತಿಯ ಮಡಿಲಿಂದ, ಬದುಕಿನ ಹೋರಾಟದ ರಣರಂಗವಾದ ಬೆಂಗಳೂರಿಗೆ ವಾಪಸ್ಸು ತಂದು ಎಸೆದಿತ್ತು.

ಚಾರಣ ಯಶಸ್ವಿಯಾಗಲು ಮೊದಲ ಕಾರಣ ನಮ್ಮ ಅದ್ಭುತ ತಂಡ. ಗೋಪಿ ಮತ್ತು ಮಹೇಶ ಚಾರಣಕ್ಕೆ ಮಾಡಿದ ಪೂರ್ವತಯಾರಿ ಮತ್ತು ಏರ್ಪಾಡುಗಳನ್ನು ನೆನೆಯಲೇ ಬೇಕು. ಎರಡು ದಿನ ಜೊತೆಯಲ್ಲಿ ಇಟ್ಟ ಹೆಜ್ಜೆ ನನಗೆ ಒಳ್ಳೆಯ ಗೆಳೆಯರನ್ನು ಒದಗಿಸುವುದರ ಜೊತೆಗೆ ಸುಂದರ ನೆನಪುಗಳನ್ನೂ ಉಳಿಸಿ ಹೋಯಿತು. ಉಪ್ಪಿ ಮತ್ತು ಶೃತಿಯ ಬೆಕ್ಕಿನ ಜಗಳಗಳು...ಅದನ್ನು ಬಿಡಿಸಲು ಉಪ್ಪಿಯ ಕಾಲರ್ ಹಿಡಿದು ಎಳಕೊಂಡು ಹೋದ ಪುಟ್ಟಿ...ಬಾಕಿ ಇರುವ ಬಿರ್ಯಾನಿಗಾಗಿ ಶೃತಿಯೊಡನೆ ಜಗಳ ತೆಗೆದ ಅಶ್ವಲ್...ಮೂರ್ತಿ ಚಿಕ್ಕದಾದರೂ ಇದ್ದ ಬಿದ್ದ ಗುಡ್ದಗಳನ್ನೆಲ್ಲ ಹತ್ತಿಳಿದ ಲತಾ... ಕುಳಿತಲ್ಲೆಲ್ಲ ಗೊರಕೆ ಹೊಡೆದ ಸುಂಡಿ...ನಮ್ಮೆಲ್ಲರ ಮೆಚ್ಚಿನ ಮೂಡಿಗೆರೆ ಫರ್ನಾಂಡಿಸ್...ಇದ್ದ ಬಿದ್ದ ಸಾಮಾನುಗಳೆಲ್ಲವನ್ನು ಹೊತ್ತು ವಿರಾಗಿಯಂತೆ ಬೆಟ್ಟ ಹತ್ತುತ್ತಿದ್ದ ರವಿ... ನಡುಗುವ ಕಾಲುಗಳೊಡನೆ ಜೇನುಕಲ್ಲು ಗುಡ್ಡವನ್ನು ಯಶಸ್ವಿಯಾಗಿ ಇಳಿದ ಪುಟ್ಟಿ...ನಮ್ಮೆಲ್ಲರಿಗೂ ಕುಟುಂಬದ ಮುಖ್ಯನಂತಿದ್ದ ಗೋಪಿ...ಕೊನೆಯವರೆಗೂ ನಕಾಶೆಯಲ್ಲಿ ತಪ್ಪಿದ ದಾರಿಯನ್ನು ಹುಡುಕುತ್ತಿದ್ದ ಮಹೇಶ ಮತ್ತು ಅಶ್ವಲ್... ಹೇಳುತ್ತ ಹೋದರೆ ಮುಗಿಯಲಾರದಷ್ಟು ಸಂತಸದ ಕ್ಷಣಗಳಿಗೆ ಸಾಕ್ಷಿಯಾದ ಈ ಚಾರಣ ಎಲ್ಲರಿಗೂ ಮನಸ್ಸು ತುಂಬ ಖುಷಿ ಕೊಟ್ಟದ್ದು ಸುಳ್ಳಲ್ಲ.

ಚಾರಣಗಳು ಯಾವಾಗಲೂ ನನಗೆ ಮಾನವ ನಿರ್ಮಿತ ಜಗತ್ತಿನಿಂದ ದೂರಾಗಿ, ಪ್ರಕೃತಿಯ ಮಡಿಲಲ್ಲಿ ಬದುಕುವ ಪಾಠವನ್ನು ಕಲಿಸುತ್ತವೆ. ಇನ್ನೊಂದು ಇಂಥದೇ ಸುಂದರ ಚಾರಣಕ್ಕೆ ಎದುರು ನೋಡುತ್ತಿರುವ...

ನಿಮ್ಮವ,
ಕಿರಣ್   

Friday, May 23, 2008

ಕಿರಣ ಬರೆಯುತ್ತಿದ್ದಾನೆ. . .

ಬದುಕಿನ ಬಣ್ಣಗಳು
"ಕಿರಣ  ಬರೆಯುತ್ತಿದ್ದಾನೆ..." ಎಂಬ ಶೀರ್ಷಿಕೆ ಒಂದು ಐತಿಹಾಸಿಕ ಘಟನೆಯ ಮುನ್ನುಡಿ ಎಂಬ ಅರ್ಥ ಹುಟ್ಟಿಸುತ್ತದೆಯಲ್ಲವೇ? ಅದು ಶೀರ್ಷಿಕೆಯ ತಪ್ಪೇ ಹೊರತು, ಕಿರಣ ಗೀಚುವ ಅಕ್ಷರಗಳಿಗೆ ಅಷ್ಟೊಂದು ಶಕ್ತಿ ಇಲ್ಲ ಎಂಬುದು ನನಗೂ ಚೆನ್ನಾಗಿ ಗೊತ್ತು!

ನನಗೆ ಕನ್ನಡ ಪುಸ್ತಕಗಳ ಹುಚ್ಚು ಹತ್ತಿಕೊಂಡಿದ್ದು ತುಂಬ ಹಿಂದೆ.... ಕುವೆಂಪು, ಕಾರಂತ, ತೇಜಸ್ವಿಯವರಿಂದ ಹಿಡಿದು ಜಯಂತ ಕಾಯ್ಕಿಣಿಯವರ ವರೆಗಿನ ಕನ್ನಡ ಸಾಹಿತ್ಯ ಲೋಕದ ಅಮಲು ಅಂದಿನಿಂದ ಇಂದಿನವರೆಗೂ ನನ್ನನ್ನು ಕಾಡುತ್ತಿದೆ!

ಗೀಚುವ ಗೀಳು ಶುರುವಾಗಿದ್ದು ಕಾಲೇಜು ಸೇರಿಕೊಂಡಮೇಲೆ. ಬಹುಶಃ ಪ್ರತಿ ಕವಿಯ ಆರಂಭದ ಕವಿತೆಗಳು ಸುಂದರಿಯ ಸೌಂದರ್ಯದ ಸುತ್ತಲೇ ಸುತ್ತುತ್ತವೆ, ಹೆಣ್ಣಿನ ಕಣ್ಣಿನ ಆಳದಿಂದ ಹೊರಬರಲು ಅವು ಸಮಯ ತೆಗೆದುಕೊಳ್ಳುತ್ತವೆ ... ! ಅದಕ್ಕೆ ನಾನೇನೂ ಹೊರತಲ್ಲ ಬಿಡಿ ... ಅಲ್ಲಿಗೆ ನಾನು ಕವಿ ಎಂದು ಬೆನ್ನು ಚಪ್ಪರಿಸಿಕೊಂಡದ್ದಾಯಿತು :)
ಹೆಣ್ಣ ಕಣ್ಣಿನ ಆಳವ ಅಳೆಯಬಹುದೇ ?
ಮೊನ್ನೆಯಷ್ಟೇ ನಾನು ಬ್ಲಾಗ್ ಲೋಕವನ್ನು ಪ್ರವೇಶಿಸಿದ್ದು. ಅಬ್ಬಾ...! ಅದೆಷ್ಟು ವಿಷಯಗಳಿವೆ ಈ ಲೋಕದಲ್ಲಿ ! ಕನ್ನಡದ ತಂತುಗಳು ಹಣೆದುಕೊಂಡು ಸುಂದರ ಚಿತ್ತಾರವಾಗಿ ರೂಪುಗೊಳ್ಳುತ್ತಿರುವುದನ್ನು ನೋಡಿ ತುಂಬ ಖುಷಿಯಾಗುತ್ತಿದೆ. ನಾನೂ ಈ ಚಿತ್ತಾರದ ಒಂದು ಎಳೆಯಾಗುವ ಆಸೆ, ಹಾಗಾಗಿ ... ಕಿರಣ ಬರೆಯುತ್ತಿದ್ದಾನೆ... :)