Sunday, February 12, 2012

ಮುಂಜಾವ ಹುಡುಗಿ...

ಬೆಳಿಗ್ಗೆ ಎದ್ದ ಕ್ಷಣದಿಂದಲೇ ಯಾವುದೋ ಹಳೆಯ ಹಾಡಿನ ತುಣುಕು ಮತ್ತೆ ಮತ್ತೆ ನಾಲಿಗೆಯ ತುದಿಯಲ್ಲಿ ನರ್ತಿಸುತ್ತದೆ. ನಸುಕಿನ ಮಂಜನ್ನು ಸೀಳಿ ಚುಮು ಚುಮು ಬಿಸಿಲು ನಗುತ್ತಿರುವ ಭಾವ. ದಿನಾಲೂ ತಿನ್ನುವ ಬೆಳಗಿನ ಸೇಬು ಇವತ್ತು ತುಂಬಾ ಸಿಹಿಯಾಗಿದೆ! ಇದ್ದದುರಲ್ಲೇ ಹೊಸದಾಗಿರುವ ಶರ್ಟನ್ನು ನನಗೇ ಗೊತ್ತಿಲ್ಲದಂತೆ ಆರಿಸಿಕೊಳ್ಳುತ್ತೇನೆ. ಹೊರಬಂದರೆ, ಆಗಷ್ಟೇ ಮಳೆಯಲ್ಲಿ ಮಿಂದು ನಿಂತ ಲಂಡನ್ನಿನ ಬೆಳಗು ತಂಪೆರೆಯುತ್ತದೆ. ಶರದ್ ಋತುವಿನ ಕೆಂಪು-ಹಳದಿ ಮರಗಳ ರಂಗು ಮನಸೆಲ್ಲ ಆವರಿಸಿಕೊಳ್ಳುತ್ತದೆ. ಘಾಡ ಬಣ್ಣಗಳ ತೀವ್ರತೆಯೇ ಹಾಗೆ... ಹುಚ್ಚೆಬ್ಬಿಸುತ್ತದೆ. ನಾನು ನಡೆಯುವ ದಾರಿಗುಂಟ ಇರುವ ಗಿಡಗಳ ಮೇಲೆ ಇಬ್ಬನಿಯ ಹನಿಗಳು... ಬೆಳಗಿನ ಬಿಸಿಲಿಗೆ ಮುತ್ತಿನಂತೆ ಹೊಳೆಯುವ ಅವುಗಳ ಮಿಂಚು ಕಣ್ಣೊಳಗೆ ಸೇರಿಕೊಳ್ಳುತ್ತದೆ. ಅರೆ! ಇವತ್ತು ಮನಸೇಕೆ ಹೀಗೆ ಗರಿಬಿಚ್ಚಿ ಕುಣಿಯುತ್ತಿದೆ ?

ಇವತ್ತು ಬಸ್ಸು ಕೂಡ ಸತಾಯಿಸದೆ ಸರಿಯಾದ ಸಮಯಕ್ಕೆ ಹಾಜರು. ಇಯರ್ ಫೋನಲ್ಲಿ ರತ್ನಮಾಲಾ ಪ್ರಕಾಶ್... "ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ... ಎಲ್ಲಿರುವೆ ಹೇಳು ನೀ ನಿಜವೆ ನೆರಳೇ..." ಭಾವದಲ್ಲಿ ಅದ್ದಿ ತೆಗೆದ ಹಾಡು ಎದೆ ತುಂಬಿಕೊಳ್ಳುತ್ತದೆ. ಹಾಡಿನಲ್ಲಿ ಹುಡುಕಾಟದ ನೋವಿನ ಎಳೆಯಿದ್ದರೂ ನನ್ನ ಮನದ ತುಂಬ ಮರಗಳ ಕೆಂಪು-ಹಳದಿ... ಅರಿವಿಲ್ಲದೆ ಕಿರು ನಗುವೊಂದು ಹಾದು ಹೋಗುತ್ತದೆ

ಅವಳು ಬಸ್ಸು ಹತ್ತಿದ ಕ್ಷಣ... ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದ ಮನ ಹೊರಗಿನ ರಂಗನ್ನೆಲ್ಲ ಮರೆತು ಬಿಡುತ್ತದೆ! ಬೆಳದಿಂಗಳು ಆವರಿಸಿಕೊಂಡಂತೆಬಂಗಾರದ ಕೂದಲ ರಾಜಕುಮಾರಿ ಬರೀ ನನ್ನ ಚಂದಮಾಮ ಕಥೆಗಳ ಕಾಲದಲ್ಲಿದ್ದಳುಹೌದು! ಬಂಗಾರದ ಬಣ್ಣದ ಕೂದಲುಬಣ್ಣ ಹಾಕಿಕೊಂಡಿದ್ದಾಳಾ? ಇಲ್ಲ... ನೈಜವಾದ ರೆಷಿಮೆಯಂಥ ಬಂಗಾರದ ಬಣ್ಣದ ಕೂದಲು! ಶಿಲ್ಪಿ ನಾಜೂಕಾಗಿ ಕೆತ್ತಿದಂಥ ಮೈಕಟ್ಟು... ಹಾಲ ಕೆನೆಯಂಥ ಮೈಬಣ್ಣ... ಕ್ಷಣದಲ್ಲೇ ಮೈಮರೆಸಬಲ್ಲ ಮುದ್ದು ಮುಖ. ಉದ್ದನೆಯ ಕೆಂಪು ಕೋಟಿನಲ್ಲಿ ಕಂಬಕ್ಕೆ ಆನಿಸಿ ನಿಂತ ಅವಳು ಚಿತ್ರಕಾರನ ಕಲ್ಪನೆಯ ವರ್ಣಚಿತ್ರವೆನಿಸುತ್ತಿದ್ದಾಳೆ. ಹೊಂಬಣ್ಣದ ಮುಂಗುರುಳು ಅವಳ ಮುದ್ದು ಮುಖವನ್ನು ಮುತ್ತಿಡುತ್ತಿದೆ... ನಾನೇ ಮುಂಗುರುಳಾಗಬಾರದಿತ್ತೇ... ಇನ್ನೊಂದು ಜನ್ಮವಿದೆ ಎಂದಾದರೆ ಮುಂಗುರುಳಾಗಿ ಹುಟ್ಟಬೇಕು! ಮುಂಗುರುಳ ಹಿಂದೆ ಸರಿಸಿದ ಅವಳು, ಕತ್ತೆತ್ತಿ ಕಣ್ಣು ಹಾಯಿಸುತ್ತಾಳೆ... ಕಣ್ಣುಗಳು ಸಂಧಿಸುತ್ತವೆ... ಎದೆಯೊಳಗೆ ತಣ್ಣನೆಯ ಕೋಡಿ ಹರಿಯುತ್ತದೆ. ತೆಳುವಾದ ಕಾಡಿಗೆಯ ಕಾವಲಲ್ಲಿ ಹಸಿರು ಕಣ್ಣುಗಳು... ಬಿಲ್ಲಿನಂತೆ ಬಾಗಿರುವ, ಚೂಪಾದ ಅಂಚಿರುವ ಹುಬ್ಬುಗಳು ಕೊಂಚ ಮೇಲಕ್ಕೆ ಸರಿದು 'ಏನು ?' ಎಂಬಂತೆ ಪ್ರಶ್ನಿಸುತ್ತವೆ. ತುಟಿಗಳ ಕೊಂಚವೇ ಬಿರಿದ, ಲಜ್ಜೆಗೂಡಿದ ನಗೆಯೊಡನೆ ಅವಳ ನೋಟ ನೆಲ ಸೇರುತ್ತದೆ.


"ನಾನೆ ವೀಣೆ, ನೀನೆ ತಂತಿ, ಅವನೆ ವೈಣಿಕ..." ರತ್ನಮಾಲಾ ಪ್ರಕಾಶ್ಮನಸ್ಸಿನಾಳವ ತಟ್ಟುವ ಹಾಡು ತೇಲಿ ಬರುತ್ತದೆ. ಅವಳೊಲವು ನದಿಯಾಗಿ ಹರಿಯಬಾರದೇ? ಅವಳ ಒಲವಿಲ್ಲದ ಎದೆಗೆ ಸುಂದರ ಶರದ್ ಋತುವೂ ಬಿರು ಬೇಸಿಗೆಯಂತೆ... ಸೌಂದರ್ಯವೇ ಮೈವೆತ್ತ ಮುಂಜಾವೂ ಕಾರಿರುಳಂತೆಅವಳ ಒಲವಿನ ಹಂಬಲ ಕಾಡಿದಾಗ, ಯಾವ ಪ್ರಯತ್ನವೂ ಇಲ್ಲದೆ ಕವಿತೆಯ ಸಾಲುಗಳು ಹುಟ್ಟಿಕೊಳ್ಳುತ್ತವೆ...

ನನ್ನೊಳಗ ಬೇಸಿಗೆಯು
ಕಾಯುತಿದೆ
ಮಳೆಗೆ,
ನಿನ್ನೊಲವು ತಂಪೆರೆಯೆ
ಒಡಲ ಧಗೆಗೆ.

ಹಸಿಮಣ್ಣ ಅಂಗಳವು
ಕಾದಿಹುದು ಚೆಲುವೆ,
ನಿನ್ನ ಹೆಜ್ಜೆಯ ಗುರುತೆ
ರಂಗವಲ್ಲಿಯು ಅದಕೆ.

ಕಾರಿರುಳ ರಾತ್ರಿಯಿದು
ಕಾಯುತಿದೆ ಹುಡುಗಿ,
ನೀ ಬರಲು ಹೊನಲಾಗಿ
ದಿವ್ಯ ಪ್ರಭೆಯೇ ?

ಮನಸ್ಸು ಮಾತು ಕೇಳುತ್ತಿಲ್ಲ. ಹೆಣ್ಣೆಂಬ ಮಾಯೆಯನ್ನು ಸೃಷ್ಟಿಸಿದ ದೇವರನ್ನು ಬಯ್ಯುತ್ತೇನೆ! ಕಟ್ಟುಗಳನ್ನೆಲ್ಲ ಕಿತ್ತೆಸೆದು, ಸಭ್ಯತೆಯ ಎಲ್ಲೆ ಮೀರಿ, ಹಿಡಿತ ತಪ್ಪಿದ ನನ್ನ ನೋಟ ಅವಳನ್ನೇ ದಿಟ್ಟಿಸುತ್ತದೆ. ಅವಳ ತುಟಿಯಂಚಿಗೆ ಅಂಟಿಕೊಂಡ ಮುಗುಳ್ನಗೆ, ಕರುಣೆಯಿಲ್ಲದೆ ನನ್ನಂಥ ಒಳ್ಳೆಯ ಹುಡುಗನನ್ನು ಕೊಲ್ಲುತ್ತಿದೆ. ಯಾರಲ್ಲಿ ಮೊರೆಯಿಡಲಿ...?

ಉಸಿರ ಲಯ ತಪ್ಪಿಸಿದ ಇಪ್ಪತ್ತು ನಿಮಿಷ ಕೊನೆಯಾಗುತ್ತದೆ. ಕೊನೆಗೂ ಅವಳು ನಿಲ್ದಾಣವೊಂದರಲ್ಲಿ ಇಳಿದು ಹೋಗುತ್ತಾಳೆ. ಬೆಳದಿಂಗಳು ಕಳೆದು ಹೋದ ಭಾವ... ನನ್ನ ನಿಲ್ದಾಣ ಬರುತ್ತದೆ, ತಲೆ ಕೊಡವಿ ಕೆಳಗಿಳಿಯುತ್ತೇನೆ...

ಇವತ್ತು ಅದೇನು ಕೆಲಸ ಮಾಡಿದೆನೋ ದೇವರಿಗೇ ಗೊತ್ತು. ಸಂಜೆ ಮನೆಗೆ ಹಿಂದಿರುಗುವಾಗ ಬಸ್ಸಿನಲ್ಲಿ ಬೇಡವೆಂದರೂ ನನ್ನ ಕಣ್ಣುಗಳು ಅವಳನ್ನು ಹುಡುಕುತ್ತವೆ! ಅವಳು ಕಾಣದ ಕ್ಷಣ…"ಮತ್ತದೇ ಬೇಸರ, ಅದೇ ಸಂಜೆ... ಅದೇ ಏಕಾಂತ..." ರತ್ನಮಾಲಾ ಪ್ರಕಾಶ್ ಭಾವ ತೀವ್ರತೆಯೊಂದಿಗೆ ಮನವನ್ನು ತಟ್ಟುತ್ತಾಳೆ... 

ರಾತ್ರಿ ನಿದ್ದೆ ಹತ್ತಿರವೂ ಸುಳಿಯುವುದಿಲ್ಲ... ನನ್ನದೇನೂ ತಪ್ಪಿಲ್ಲ! ಹಾಸಿಗೆಯಲ್ಲಿ  ಹೊರಳಾಡುವಾಗ ಇನ್ನೊಂದು ಕವಿತೆ ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುತ್ತದೆ...

ಅರ್ಧ ರಾತ್ರಿಯವರೆಗೆ
ತೆರೆದ ಕಂಗಳ ಮುಂದೆ
ನಿನ್ನದೇ ಬಿಂಬ,
ರೆಪ್ಪೆಗಳು ಸೋತು
ಕಣ್ಮುಚ್ಚಿಕೊಂಡಾಗ
ಕನಸಿನಲ್ಲೂ ಕಾಡುವೆಯಲ್ಲೇ !!!

ಅವಳ ನೆನಪಿನ ಸುಳಿಯಲ್ಲಿ ಸಿಕ್ಕ ಮನ ಹೊರ ಬರಲು ವ್ಯರ್ಥ ಹೋರಾಟ ನಡೆಸಿದೆ... ಹಿನ್ನೆಲೆಯಲ್ಲಿ "ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ..." ರತ್ನಮಾಲಾ ಪ್ರಕಾಶ್ ಮತ್ತೆ ಕಾಡುತ್ತಾಳೆ...

ಪ್ರೀತಿಯಿಂದ...
ಕಿರಣ್